ಮೈನಾಶ್ರೀ

ನಾನೊಬ್ಬ ಅಲೆಮಾರಿ. ಮನಸಲೆವುದಾಗಾಗ… ಒಮ್ಮೆ ಇಲ್ಲಿ…ಒಮ್ಮೆ ಸಾಫ್ಟ್ ವೇರು … ಒಮ್ಮೆ ಅತಿ ಸಾಫ್ಟ್ ವೇರು (ಕಾವ್ಯ) …. ಒಮ್ಮೆ ಲೆಕ್ಕಾಚಾರ (analytics)…. ಒಮ್ಮೆ ಚಿಗುರೊಡೆದ ಎಲೆ ಎಲೆಗೆ ಲೆಕ್ಕ ಇಟ್ಟವ ದಡ್ಡ ಎಂಬ ತಲೆಹರಟೆ.

“ಆರಂಕುಶ ವಿಟ್ಟೊಡಂ ನೆನೆವುದೆನ್ನಮನಂ ಬನವಾಸಿ ದೇಶಮಂ” ಎಂಬಂತೆ ಜೀವನದ ಯಾವುದೇ ವಿಷಯಗಳು ನನ್ನ ಸುತ್ತ ಇದ್ದರೂ, ಮನದಾಳದಲ್ಲಿ ಕಾವ್ಯವಂತೂ ಗುನುಗುತ್ತಲೇ ಇರುತ್ತದೆ.

ಲೋಗರಾಟಗಳನಾಡು ಗೊಮ್ಮಟನ ತೆರದಿ

( ಕಗ್ಗವೊಂದನ್ನು Grp.Capt. ಶ್ರೀಹರಿ ಕೌಶಿಕ್ ಕಳುಹಿದ ಅವರೇ ತೆಗೆದ ಚಿತ್ರದ ಪ್ರೇರಣೆಯಿಂದ ಹದಿನಾಲ್ಕು ಸಾಲಿನ ಸುನೀತವಾಗಿಸಿದ್ದೇನೆ sonnet )


_________________________________________________

ಲೋಗರಾಟಗಳನಾಡು ಗೊಮ್ಮಟನ ತೆರದಿ

ಎರಡು ಕೋಣೆಗಳ ನೀಂ ಮಾಡು ಮನದಾಲಯದಿ ।
ಹೊರಕೋಣೆಯಲಿ ಲೋಗರಾಟಗಳನಾಡು ॥
ವಿರಮಿಸೊಬ್ಬನೆ ಮೌನದೊಳಮನೆಯಲಿ ಶಾಂತಿಯಲಿ ।
ವರಯೋಗಸೂತ್ರವಿದು – ಮಂಕುತಿಮ್ಮ ॥ ೭೦೧ ॥

ಚಿರಸ್ಥಾಯಿ ಇನಬಿಂಬ ತೆರನಂತೆ ನಿಲುಮೆಯಲಿ ।
ಪೊರೆ ನೀನು ಒಳಕೋಣೆಯೊಳ ಸ್ಥಿತಿಯ ಜಾಣ್ಮೆಯಲಿ ॥
ಗರಡಿಯನು ಅಣಿಮಾಡಿ ಗೊಮ್ಮಟನ ರೀತಿಯಲಿ ।
ಹೊರಲೋಕದರಿವೆಲ್ಲಿ ಮನ ಬ್ರಹ್ಮದಲಿ ನಿಲಲು ॥

ಹೊರಕೋಣೆಯಾಗುವುದು ನಿನ ಸ್ಥೈರ್ಯಪ್ರತಿಬಿಂಬ ।
ಮೊರೆವವಲೆಯಲೆಗಳೀ ಬಾಳದೋಣಿಯಲೀ ॥
ಪರಿಪರಿಯ ರೂಪದಲಿ ಪ್ರತಿರೂಪ ಮಿಡಿಯುವುದು ।
ಹಿರಿತನದಿ ಮಿಡಿಯುವುದು ಒಳರೂಪವಲುಗದಿರೆ ॥

ಹೊರಕೋಣೆಯಲಿ ಲೋಗರಾಟಗಳನಾಡು ॥
ವಿರಮಿಸೊಬ್ಬನೆ ಮೌನದೊಳಮನೆಯಲಿ ಶಾಂತಿಯಲಿ ॥

_________________________________________________

ಪಥದೊಳಿಳಿ ( Get onto the road towards your destination)

Inspired by the beautiful sunset on this beautiful Arabian Road.

Summary: No point in having big goals until you get onto the road and start working towards it.

The sun starts and shines every day and hence is able to move to his destination day in and day out.

Can be used in Corporate Context, where strategy without action, plans without execution are useless.

Thanks to Manju Iyengar (my cousin), for the beautiful pictures.

________________________________________________________

ಪಥದೊಳಿಳಿ 

ಪಥಿಕರೆಲ್ಲರು ಗುರಿಯ ಹೊಂದುವ

ಕಥೆಯಿದಲ್ಲವೆ ನಿತ್ಯ ನೂತನ

ಪೃಥುಲವಿವನದು ಅರುಣಕಿರಣವು

ಪ್ರಥೆಯ ಹೊಂದಿದೆ ಜಗದ ಬಯಲಲಿ

ಸಾರ್ಥವಾಗಿದೆ ಸುದಿನವೀ ಪರಿ

ಮಥನಮಾಡಿರಿ ಮನದೊಳ್ ನಿಮ್ಮ

ತಥ್ಯವಿದ ನೀವ್ ಪಥ್ಯ ಮಾಡಿರಿ

ಪಥದೊಳಿಳಿಯದೆ ಗುರಿಯು ವ್ಯರ್ಥವು

________________________________________________________

ಅರ್ಥಗಳು:

ಪಥಿಕ ದಾರಿಯಲ್ಲಿ ಇರುವವನು

ಪೃಥುಲ = ಹಿರಿಯ, ದೊಡ್ಡ

ಪ್ರಥೆ ಕೀರ್ತಿ, ಹಿರಿಮೆ

ಮಥನ = ಕಡೆಯುವುದು, ಮಂಥನ

ತಥ್ಯ ನಿಜ, ಸತ್ಯ, ದಿಟ

ಪಥ್ಯ ಆಹಾರ

ಪಥ ದಾರಿ

ತಿರುಪ್ಪಾವೈ ಮೂರನೆಯ ಪಾಶುರ (ಪದ್ಯ) – ಓಂಗಿ ಉಳಹಳಂದ

ಅಂಡಾಳ್ ವಿರಚಿತ

ತಿರುಪ್ಪಾವೈ

 

ಕನ್ನಡ ಭಾವಾನುವಾದ

— ಮೈನಾಶ್ರೀ ೦೨ -೦೧ -೨೦೧೭

 

“ಓಂಗಿ ಉಳಹಳಂದ” ಪಾಶುರದ ಕನ್ನಡ ಪದ್ಯ

 

———————

ಬೆಳೆದು ಲೋಕಂಗಳನು ಅಳೆದ

ಉತ್ತಮನ ಹೆಸರ್ ಹಾಡಿ

ಕಳೆದು ಕಲುಷವ ನಾವು ನಮ್ಮಯ

ಪಾವೈಯೋಕುಳಿ ಆಡುತ

ಖಳವ ಕೊಡಹಿದ ನಾಡಲ್ ಮಾಸದಿ

ಮೂರ್ಬಾರಿ ಮಳೆಯು ಸುರಿಯುತ

ಬೆಳೆದ ಸುಂದರ ಹಿರಿಯ ನೆಲ್ಲಲಿ

ಆಡುತ  ಕಿರು ಮೀನ್ ಗಳು

ಹೊಳೆವ ದುಂಬಿಯು ಚೆಲುವ ಹೂವಿನ

ಎಸಳ ಹೊದೆದು ಮಲಗಿದೆ

ಮೊಲೆಯು ತುಂಬಿದ ಕಾಮಧೇನುಗಳ್

ಶಿಲೆಯ ಚಂದದಿ ನಿಲ್ಲುತ

ಚೆಲ್ಲಿ ಸೂಸಿವೆ ಕೊಡವ ಹರಿಸಿವೆ

ಗೋಪ ಮನವ ತುಂಬುತ

ಅಳಿಯದಿರದ ಐಸಿರಿಯು ಬಂದಿದೆ

ಪಾವೈ ವ್ರತವು ತರುತಿದೆ         || ೩ ||


ತಿರುಪ್ಪಾವೈ

ಹಿಂದಿನ ಪಾಶುರ

ಮುಂದಿನ ಪಾಶುರ


 

ತಿರುಪ್ಪಾವೈ ಮೊದಲನೇ ಪಾಶುರ (ಪದ್ಯ) – ಮಾರ್ಹಳಿ ತಿಂಗಳ್

ಅಂಡಾಳ್ ವಿರಚಿತ
ತಿರುಪ್ಪಾವೈ

ಕನ್ನಡ ಭಾವಾನುವಾದ
— ಮೈನಾಶ್ರೀ ೨೯-೧೨-೨೦೧೬

೧ನೆಯ ಪಾಶುರ
ಮಾರ್ಹಳಿ ತಿಂಗಳ್
__________________________
— ಮೈನಾಶ್ರೀ ೨೮-೧೨-೨೦೧೬

ಮಾರ್ಗಶೀರ್ಷದೊಳಿಂದು ಪೂರ್ಣಚಂದಿರನು ಬಂದಿರೇ
ನೀರಿನಾಟವನಾಡೆ ಹೋಗೋಣ ಗೋಪೆಯೆರೇ
ಸಿರಿವಂತಗೋಕುಲದ ಚೆಲುವ ಚೆನ್ನೆಯರೇ
ಹರಿತದೀಟಿಯದುಷ್ಟದಮನನು ನಂದಗೋಪಕಂದ ತಾನೇ
ಕರ್ಷಿಸುವ ಕಣ್ಣುಗಳ ಯಶೋದೆಮನೆ ಸಿಂಹನೇ
ಕರಿಮೈಯ ಚೆಂಗಣ್ಣ ರವಿಶಶಿವದನನೇ
ನಾರಾಯಣನೇ ನಮ್ಮನಿಹದಲಿ ಕಾಯ್ದು ಪರಕೊಯ್ವನೇ
ಆರಾಧಿಸಲು ಪಾವೈ ನೋಂಪನು ಮಡಿಯುಟ್ಟು ಬನ್ನಿರೇ


Based on:
http://www.ibiblio.org/sripedia/ebooks/tpv/vstp02.html

ತಿರುಪ್ಪಾವೈ ಎರಡನೇ ಪಾಶುರ (ಪದ್ಯ) – ವೈಯತ್ತು ವಾಳ್ ವೀರ್ಕಾಳ್

ಅಂಡಾಳ್ ವಿರಚಿತ
ತಿರುಪ್ಪಾವೈ

ಕನ್ನಡ ಭಾವಾನುವಾದ
— ಮೈನಾಶ್ರೀ ೨೯-೧೨-೨೦೧೬

೨ನೆಯ ಪಾಶುರ
ವೈಯತ್ತು ವಾಳ್ ವೀರ್ಕಾಳ್
———-

ಇಹದಲರ್ಚಿಸಿ ಬಾಳುವರೇ ನಾವು ನಮ್ಪಾವೈಗೆ
ಅಹದಿ ಸೆಯ್ವ ಕೃತಿಯ ಕೇಳಿರೇ ಪಾಲಕಡಲೊಳು
ಮಹದ ನಿದ್ರೆಯ ಗೈಯ್ವ ಪರಮನ ಅಡಿಯ ಪಾಡಲು
ಸಹವಿಸಿಲ್ಲೆವು ಘೃತವ ಹಾಲ್ಗಳ ಆಗಿ ಶುಚಿತರು ನಸುಕಲಿ
ರಹಿತವಾಗಿ ಕಣ್ಣ ಕಪ್ಪನು ಮುಡಿಯದಲೇ ಮುಡಿ ಹೂವನು
ವಹಿಸದಿರುವೆವು ವರ್ಜ್ಯಕರ್ಮವ ಸ್ತುತಿಸೆವು ಕೆಡು ಕಥೆಯನು
ವಿಹಿತ ಕೈಲಾದುದನು ಕೊಡುವೆವು ಭಿಕ್ಷೆ ದಕ್ಷಿಣೆಯನುದಿನ
ಸಹಿತಸಂತಸ ನೆನೆದು ಮುಕ್ತಿಯ ಪಾವೈ ಪಾಡುವ ಬನ್ನಿರೇ

Based on:
http://www.ibiblio.org/sripedia/ebooks/tpv/vstp02.html

ಜೀವನ ಕಮ್ಮಟ

ಜೀವನ ಕಮ್ಮಟ
_____________
— ಮೈನಾಶ್ರೀ ೨೭-೧೨-೨೦೧೬

ಸೋಲ್ಮೆ ಗೆಲ್ಮೆಗಳೆಲ್ಲ ಮನದ ನಿಲುಮೆಗಳಷ್ಟೇ
ಪೆರ್ಮೆ ಕೀಳ್ಮೆಗಳೆಲ್ಲ ಮನುಜ ಕಿರಿಮೆಗಳಷ್ಟೇ
ಹಮ್ಮು ಬಿಮ್ಮಾನವನು ಸುಡುವ ಕುಲುಮೆಯಿದಷ್ಟೇ
ನಲ್ಮೆ ಒಲ್ಮೆಗಳೆಲ್ಲ ಇಹದ ಗಂಟುಗಳಷ್ಟೇ
ದೊಮ್ಮರಾಟದ ನಡುವೆ ಕಂಬ ಹತ್ತುವುದಷ್ಟೇ
ಪೆರ್ಮೆಯಾತ್ಮನಲಿ ತನ್ಮಯಕೂರ್ಮೆಯದಷ್ಟೇ
ಬೊಮ್ಮನಾಡಿಸುವ ಬೊಮ್ಮೆಯಾಟವದಷ್ಟೇ
ಚಿಮ್ಮುವ ಚಿಂತ್ಯಚಿಂತ್ಯಗಳ ಚಿಂತನೆಯ ಕಮ್ಮಟವಿದಷ್ಟೇ

ಅರ್ಥಗಳು – ಅನರ್ಥಗಳು
________________
ಸೋಲ್ಮೆ – ಸೋಲುವುದು
ಗೆಲ್ಮೆ – ಗೆಲುವುದು
ನಿಲುಮೆ – stands
ಪೆರ್ಮೆ – ಹಿರಿಮೆ, ದೊಡ್ಡತನ
ಕೀಳ್ಮೆ – ಕೆಳಮೆ, ಸಣ್ಣತನ, ಕೀಳಾಗಿ ಕಾಣುವುದು
ಕಿರಿಮೆ – ಕಿರಿತನ, ಸಣ್ಣತನ
ಹಮ್ಮು – ಅಹಂಕಾರ
ಬಿಮ್ಮು, ಬಿಮ್ಮಾನ – ಬಿಗುಮಾನ, ಅಹಂಕಾರ
ಕುಲುಮೆ – furnace
ನಲ್ಮೆ,, ಒಲ್ಮೆ – ಪ್ರೀತಿ
ಚಿಂತ್ಯ – ಚಿಂತಿಸಲು ಸಾಧ್ಯವಾದ ವಸ್ತು, comprehesible
ಅಚಿಂತ್ಯ – ಚಿಂತ್ಯಕ್ಕೆ ವಿರುದ್ಧ incomprehensible
ಕಮ್ಮಟ – ತರಬೇತಿ ನೀಡುವ ಕಾರ್ಯಕ್ರಮ, workshop
ಪೆರ್ಮೆಯಾತ್ಮ – ಪರಮಾತ್ಮ
ತನ್ಮಯ – ತಲ್ಲೀನ,
ಕೂರ್ಮೆ – ಪ್ರೀತಿ, ನಲ್ಮೆ
ಬೊಮ್ಮ – ಬ್ರಹ್ಮ, ವಿಷ್ಣು
ಬೊಮ್ಮೆಯಾಟ – ಗೊಂಬೆಯಾಟ, puppet show