Monthly Archive: December 2016

ತಿರುಪ್ಪಾವೈ ಮೊದಲನೇ ಪಾಶುರ (ಪದ್ಯ) – ಮಾರ್ಹಳಿ ತಿಂಗಳ್

ಅಂಡಾಳ್ ವಿರಚಿತ
ತಿರುಪ್ಪಾವೈ

ಕನ್ನಡ ಭಾವಾನುವಾದ
— ಮೈನಾಶ್ರೀ ೨೯-೧೨-೨೦೧೬

೧ನೆಯ ಪಾಶುರ
ಮಾರ್ಹಳಿ ತಿಂಗಳ್
__________________________
— ಮೈನಾಶ್ರೀ ೨೮-೧೨-೨೦೧೬

ಮಾರ್ಗಶೀರ್ಷದೊಳಿಂದು ಪೂರ್ಣಚಂದಿರನು ಬಂದಿರೇ
ನೀರಿನಾಟವನಾಡೆ ಹೋಗೋಣ ಗೋಪೆಯೆರೇ
ಸಿರಿವಂತಗೋಕುಲದ ಚೆಲುವ ಚೆನ್ನೆಯರೇ
ಹರಿತದೀಟಿಯದುಷ್ಟದಮನನು ನಂದಗೋಪಕಂದ ತಾನೇ
ಕರ್ಷಿಸುವ ಕಣ್ಣುಗಳ ಯಶೋದೆಮನೆ ಸಿಂಹನೇ
ಕರಿಮೈಯ ಚೆಂಗಣ್ಣ ರವಿಶಶಿವದನನೇ
ನಾರಾಯಣನೇ ನಮ್ಮನಿಹದಲಿ ಕಾಯ್ದು ಪರಕೊಯ್ವನೇ
ಆರಾಧಿಸಲು ಪಾವೈ ನೋಂಪನು ಮಡಿಯುಟ್ಟು ಬನ್ನಿರೇ


Based on:
http://www.ibiblio.org/sripedia/ebooks/tpv/vstp02.html

ತಿರುಪ್ಪಾವೈ ಎರಡನೇ ಪಾಶುರ (ಪದ್ಯ) – ವೈಯತ್ತು ವಾಳ್ ವೀರ್ಕಾಳ್

ಅಂಡಾಳ್ ವಿರಚಿತ
ತಿರುಪ್ಪಾವೈ

ಕನ್ನಡ ಭಾವಾನುವಾದ
— ಮೈನಾಶ್ರೀ ೨೯-೧೨-೨೦೧೬

೨ನೆಯ ಪಾಶುರ
ವೈಯತ್ತು ವಾಳ್ ವೀರ್ಕಾಳ್
———-

ಇಹದಲರ್ಚಿಸಿ ಬಾಳುವರೇ ನಾವು ನಮ್ಪಾವೈಗೆ
ಅಹದಿ ಸೆಯ್ವ ಕೃತಿಯ ಕೇಳಿರೇ ಪಾಲಕಡಲೊಳು
ಮಹದ ನಿದ್ರೆಯ ಗೈಯ್ವ ಪರಮನ ಅಡಿಯ ಪಾಡಲು
ಸಹವಿಸಿಲ್ಲೆವು ಘೃತವ ಹಾಲ್ಗಳ ಆಗಿ ಶುಚಿತರು ನಸುಕಲಿ
ರಹಿತವಾಗಿ ಕಣ್ಣ ಕಪ್ಪನು ಮುಡಿಯದಲೇ ಮುಡಿ ಹೂವನು
ವಹಿಸದಿರುವೆವು ವರ್ಜ್ಯಕರ್ಮವ ಸ್ತುತಿಸೆವು ಕೆಡು ಕಥೆಯನು
ವಿಹಿತ ಕೈಲಾದುದನು ಕೊಡುವೆವು ಭಿಕ್ಷೆ ದಕ್ಷಿಣೆಯನುದಿನ
ಸಹಿತಸಂತಸ ನೆನೆದು ಮುಕ್ತಿಯ ಪಾವೈ ಪಾಡುವ ಬನ್ನಿರೇ

Based on:
http://www.ibiblio.org/sripedia/ebooks/tpv/vstp02.html

ಜೀವನ ಕಮ್ಮಟ

ಜೀವನ ಕಮ್ಮಟ
_____________
— ಮೈನಾಶ್ರೀ ೨೭-೧೨-೨೦೧೬

ಸೋಲ್ಮೆ ಗೆಲ್ಮೆಗಳೆಲ್ಲ ಮನದ ನಿಲುಮೆಗಳಷ್ಟೇ
ಪೆರ್ಮೆ ಕೀಳ್ಮೆಗಳೆಲ್ಲ ಮನುಜ ಕಿರಿಮೆಗಳಷ್ಟೇ
ಹಮ್ಮು ಬಿಮ್ಮಾನವನು ಸುಡುವ ಕುಲುಮೆಯಿದಷ್ಟೇ
ನಲ್ಮೆ ಒಲ್ಮೆಗಳೆಲ್ಲ ಇಹದ ಗಂಟುಗಳಷ್ಟೇ
ದೊಮ್ಮರಾಟದ ನಡುವೆ ಕಂಬ ಹತ್ತುವುದಷ್ಟೇ
ಪೆರ್ಮೆಯಾತ್ಮನಲಿ ತನ್ಮಯಕೂರ್ಮೆಯದಷ್ಟೇ
ಬೊಮ್ಮನಾಡಿಸುವ ಬೊಮ್ಮೆಯಾಟವದಷ್ಟೇ
ಚಿಮ್ಮುವ ಚಿಂತ್ಯಚಿಂತ್ಯಗಳ ಚಿಂತನೆಯ ಕಮ್ಮಟವಿದಷ್ಟೇ

ಅರ್ಥಗಳು – ಅನರ್ಥಗಳು
________________
ಸೋಲ್ಮೆ – ಸೋಲುವುದು
ಗೆಲ್ಮೆ – ಗೆಲುವುದು
ನಿಲುಮೆ – stands
ಪೆರ್ಮೆ – ಹಿರಿಮೆ, ದೊಡ್ಡತನ
ಕೀಳ್ಮೆ – ಕೆಳಮೆ, ಸಣ್ಣತನ, ಕೀಳಾಗಿ ಕಾಣುವುದು
ಕಿರಿಮೆ – ಕಿರಿತನ, ಸಣ್ಣತನ
ಹಮ್ಮು – ಅಹಂಕಾರ
ಬಿಮ್ಮು, ಬಿಮ್ಮಾನ – ಬಿಗುಮಾನ, ಅಹಂಕಾರ
ಕುಲುಮೆ – furnace
ನಲ್ಮೆ,, ಒಲ್ಮೆ – ಪ್ರೀತಿ
ಚಿಂತ್ಯ – ಚಿಂತಿಸಲು ಸಾಧ್ಯವಾದ ವಸ್ತು, comprehesible
ಅಚಿಂತ್ಯ – ಚಿಂತ್ಯಕ್ಕೆ ವಿರುದ್ಧ incomprehensible
ಕಮ್ಮಟ – ತರಬೇತಿ ನೀಡುವ ಕಾರ್ಯಕ್ರಮ, workshop
ಪೆರ್ಮೆಯಾತ್ಮ – ಪರಮಾತ್ಮ
ತನ್ಮಯ – ತಲ್ಲೀನ,
ಕೂರ್ಮೆ – ಪ್ರೀತಿ, ನಲ್ಮೆ
ಬೊಮ್ಮ – ಬ್ರಹ್ಮ, ವಿಷ್ಣು
ಬೊಮ್ಮೆಯಾಟ – ಗೊಂಬೆಯಾಟ, puppet show

ಸಂಸ್ಕಾರ – ಡಾ. ಯು.ಆರ್.ಅನಂತ ಮೂರ್ತಿ (ನನ್ನ ವಿಮರ್ಶೆ)

ಸಂಸ್ಕಾರ
______
ಮೈನಾಶ್ರೀ – ೨೩-೧೨-೨೦೧೬

ಡಾ. ಯು.ಆರ್.ಅನಂತ ಮೂರ್ತಿ ಯವರ ಸಂಸ್ಕಾರ ಕಾದಂಬರಿಯನ್ನು ಮೊನ್ನೆ ಓದಿ ಮುಗಿಸಿದೆ. ಈ ಕಾದಂಬರಿಯು ಅದೇಕೆ ಹೆಸರು ಮಾಡಿತೋ ಗೊತ್ತಾಗಲಿಲ್ಲ. ಅಂತಹ ನಿಯಮೋಲ್ಲಂಘನ ಮಾಡುವಂತಹ ವಿಚಾರಗಳು ಏನೂ ಇರಲಿಲ್ಲ. ಅಥವಾ ಅದು ಬರೆದ ಸಮಯದಲ್ಲಿ ಅದು ಹೆಚ್ಚೆನಿಸಿತೋ ಕಾಣೆ.

ಆದರೆ ಅದನ್ನು ಬರೆದ ಸಮಯದಲ್ಲಿ ಎಲ್ಲರೂ ಬ್ರಾಹ್ಮಣರನ್ನು ಅವಹೇಳನ ಮಾಡುತ್ತಲೇ ಇದ್ದರು. ಆ ಸಮಯದಲ್ಲಿ ಸಾಕಷ್ಟು ಬ್ರಾಹ್ಮಣರಿಗೆ ಹೆಚ್ಚು ತಾರತಮ್ಯ ನಡೆಯುತ್ತಿತ್ತು. ಹಾಗಾಗಿ “ಗುಂಪಿನಲ್ಲಿ ಗೋವಿಂದ” ಅಥವಾ “ನಾನೂ ಈ ವಿಷಯದಲ್ಲಿ ಒಂದಿಷ್ಟು ಮಣ್ಣು ಹೊತ್ತೆ” ಎಂದು ಬರೆದಿದ್ದಾರೇನೋ ಅನಿಸಿತು.

ಮೊದಲನೆಯದಾಗಿ ಬ್ರಾಹ್ಮಣರ ಒಳ ರಾಜಕೀಯವೇನೋ ಎಂದು ಚಿತ್ರಿತವಾಗಿರುವುದು ಯಾವುದೇ ಸಾಮಾನ್ಯ ಕಥೆಯ, ಇಂದಿನ ದಿನದ ಪ್ರತಿ ಟಿವಿ-ಧಾರಾವಾಹಿಯ ಕುಟುಂಬದ ಒಳ ಜಗಳ ಹಾಗೂ ಪಂಗಡದ ಒಳ ಜಗಳವಾಗಿದ್ದು, ಅದರಲ್ಲಿ ಅಂತಹ ಸಾಮಾಜಿಕ, ತಾರ್ಕಿಕ ಅಥವಾ ತಾತ್ತ್ವಿಕ ವಿಷಯಗಳ ಚರ್ಚೆಯೇನಿಲ್ಲ.

ಎರಡನೆಯದಾಗಿ ಮುಖ್ಯ ಪಾತ್ರವಾದ ಪ್ರಾಣೇಶಾಚಾರ್ಯ ರೋಗಿಯೊಬ್ಬಳನ್ನು ಮದುವೆಯಾಗಿ ತನ್ನ ಜೀವನ ಮುಡಿಪಾಗಿಡುವೆ ಎಂಬುದು ಸನಾತನ ಧರ್ಮದ ಲಕ್ಷಣವೇ ಅಲ್ಲ, ಕ್ರೈಸ್ತ ಧರ್ಮದ ಮೂಲ ವಿಚಾರ ಎಂದು ಡಾ. ಆರ್. ಗಣೇಶ್ ಮತ್ತಿತರ ವಿದ್ವಾಂಸರು ಅಭಿಪ್ರಾಯ ಪಟ್ಟಿದ್ದಾರೆ. ಆತ್ಮ ಹಿಂಸೆಯಿಂದ, ತನ್ನನ್ನೇ ತಾನು ನೋಯಿಸಿಕೊಂಡು ಪುಣ್ಯ ಗಳಿಸುವುದು ಸನಾತನ ಧರ್ಮದಲ್ಲೆಲ್ಲೂ ಕಂಡಿಲ್ಲ. ಹಾಗಾಗಿ ಯಾರನ್ನು ದೊಡ್ಡ ವಿದ್ವಾಂಸ, ಕಾಶಿಯಿಂದ ಕಲಿತು ಬಂದು ಬ್ರಾಹ್ಮಣ್ಯವನ್ನು (ಜಾತಿಯನಲ್ಲ) ಬೆಳೆಸುವವರು ಎಂದು ಚಿತ್ರಿಸಲು ಪ್ರಯತ್ನವಾಗಿದೆಯೋ, ಅವರ ಜೀವನ ಶೈಲಿ ಮತ್ತು ಆಯ್ಕೆ ಸನಾತನವಲ್ಲ. ಆದರೆ ಅದನ್ನೇ ಸನಾತನವೆಂದು ತನ್ನ ಓದುಗರಿಗೆ ಮನಸ್ಸಿಗೆ ಬರುವಂತೆ ಚಿತ್ರಿತಲು ಪ್ರಯತ್ನಿಸಿರುವುದು ಅವರ ಜ್ಞಾನದ ಬಗ್ಗೆ ಪ್ರಶ್ನೆಯೆಬ್ಬಿಸುತ್ತದೆ.

ಮೂರನೆಯದಾಗಿ ವಿನಾ ಕಾರಣ ತುರುಕರ ಸಹವಾಸ ಕೀಳೆಂಬಂತೆ ಚಿತ್ರಿಸಿದ್ದಾರೆ. ನಾನು ನನ್ನ ಇಸ್ಲಾಂ ಸ್ನೇಹಿತರ ಮನೆಗೆ ಹೋಗಿ ಬಂದರೆ ಅಥವಾ ಅವರು ನಮ್ಮ ಮನೆಗೆ ಬಂದರೆ ನಮ್ಮ ಅಜ್ಜಿ (೭೦ರ ಮೊದಲಲ್ಲಿನ ಬಹಳ ಮಡಿ ಮತ್ತು ಆಚಾರವಂತರು ) ಎಂದೂ ತಪ್ಪು ಹೇಳುತ್ತಿರಲಿಲ್ಲ.

ನಾಲ್ಕನೆಯದಾಗಿ ಏನನ್ನು ದೊಡ್ಡ ಜ್ಞಾನ ಪ್ರಾಪ್ತಿ ಎಂದು ಚಿತ್ರಿಸಿದ್ದಾರೋ ಅಲ್ಲಿ ಬರಿ ಲೈಂಗಿಕ ಚಿಂತನೆಯೊಂದೆ ಕಾಣುವುದು. ಚಂದ್ರಿಯ ಮೊಲೆಯೂ ಬೆಳ್ಳಿಯ ಮೊಲೆಯೂ ಚಿತ್ರಿತವಾಗಿರುವ ಸ್ಥಳದಲ್ಲಿ ಅರೆ ನಯಾ ಪೈಸಾದಷ್ಟು ಸನಾತನ ಧರ್ಮವನ್ನು ಚಿತ್ರಿಸಬಹುದಿತ್ತೇನೋ?

ಇಷ್ಟು ದಿನ ಈ ಕಾದಂಬರಿಯನ್ನು ಓದದೆ ಇದ್ದದ್ದು ಅಂತಹ ನಷ್ಟವೇನೂ ಇಲ್ಲವೆನಿಸಿತು. “ಸಂಸ್ಕಾರ” ವೆನ್ನುವ ಬದಲು “ಚಂದ್ರಿಯ ಮೊಲೆ” ಎಂದು ಕರೆದರೂ ಇದರ ತೂಕವೇನೂ ತಗ್ಗದು!